ದಸರಾ ಉದ್ಘಾಟನೆಗೆ ಎಸ್.ಎಂ.ಕೃಷ್ಣರವರಿಗೆ ಅಧಿಕೃತ ಆಹ್ವಾನ

Saturday, October 2, 2021

ನಾಡಹಬ್ಬ ಮೈಸೂರು ದಸರಾ ಉದ್ಘಾಟನೆಗೆ ಮಾಜಿ ಮುಖ್ಯಮಂತ್ರಿ, ಹಿರಿಯ ಮುತ್ಸದಿ ಎಸ್.ಎಂ.ಕೃಷ್ಣ ಅವರಿಗೆ ರಾಜ್ಯ ಸರಕಾರ ಶನಿವಾರ ಅಧಿಕೃತ ಆಹ್ವಾನ ನೀಡಿತು. 

ಶನಿವಾರ ಬೆಂಗಳೂರಿನ ಸದಾಶಿವನಗರದ ಅವರ ನಿವಾಸದಲ್ಲಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ, ಸಹಕಾರ ಸಚಿವ ಹಾಗು ಮೈಸೂರು-ಚಾಮರಾಜನಗರ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್, ಕಂದಾಯ ಸಚಿವ ಅಶೋಕ್ ೨೦೨೧ರ ಸಾಲಿನ ಮೈಸೂರು ದಸರಾ ಉದ್ಘಾಟನೆಗೆ ಆಮಂತ್ರಣ ನೀಡಿದರು. 

ಬಳಿಕ ಮಾತನಾಡಿ ಎಸ್.ಎಂ.ಕೃಷ್ಣ, ದಸರಾ ಉದ್ಘಾಟನೆಗೆ ನನ್ನನ್ನು ಆಹ್ವಾನಿಸಿರುವುದು ನನ್ನ ಬಾಳಿನ ಸುದೈವ. ತಾಯಿ ಚಾಮುಂಡೇಶ್ವರಿ ಆಶೀರ್ವಾದದಿಂದ ನಾಡಿನ ಸರ್ವತೋಮುಖ ಅಭಿವೃದ್ಧಿಯಾಗಲಿ. ನನ್ನ ವ್ಯಕ್ತಿತ್ವದ ಪೋಷಣೆಗೆ ಹಾಗು ಅದನ್ನು ರೂಪಿಸಲಿಕ್ಕೆ ಮೈಸೂರು ಮತ್ತು ರಾಮಕೃಷ್ಣ ಆಶ್ರಮ ಬಹಳ ಪ್ರಭಾವವನ್ನು ಬೀರಿದೆ. ನನ್ನ ಶಾಲೆ ಮತ್ತು ಕಾಲೇಜು ದಿನಗಳನ್ನು ಮೈಸೂರಿನಲ್ಲಿ ಕಳೆದಿದ್ದೆ. ಇದೀಗ ದಸರಾ ಉದ್ಘಾಟನೆ ಮಾಡುವ ಸುಯೋಗ ಸಿಕ್ಕಿದೆ ಎಂದು ಸಂತಸ ವ್ಯಕ್ತಪಡಿಸಿದರು.

ನನ್ನ ಮೇಲೆ ಗೌರವವಿಟ್ಟು ಇಂತಹ ಅವಕಾಶ ನೀಡಿದ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ, ಸಹಕಾರ ಸಚಿವ ಎಸ್.ಟಿ.ಸೋಮಶೇಖರ್, ಸಚಿವ ಸಂಪುಟದ ಎಲ್ಲರಿಗೂ ನನ್ನ ಅಭೂತಪೂರ್ವ ಅಭಿನಂದನೆಗಳು. ಸರ್ಕಾರದ ಈ ಆಹ್ವಾನವನ್ನು ವಿನಮ್ರವಾಗಿ ಸ್ವೀಕರಿಸುತ್ತಿದ್ದೇನೆ ಎಂದು ಹೇಳಿದರು.

ಇದೇ ವೇಳೆ ಮಾತನಾಡಿದ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ, ದಸರಾ ಉದ್ಘಾಟನೆಗೆ ಯಾರನ್ನು ಆಯ್ಕೆ ಮಾಡಬೇಕು ಎಂಬ ಚರ್ಚೆ ಬಂದಾಗ ಸರ್ವಸಮ್ಮತದಿಂದ ಬಂದ ಹೆಸರು ಹಿರಿಯ ಮುತ್ಸುದ್ಧಿ ಎಸ್.ಎಂ.ಕೃಷ್ಣ ಅವರದ್ದು ಎಂದು ಹೇಳಿದರು. 

ಸಾಮಾನ್ಯ ರಾಜಕಾರಣದಿಂದ ಬಹಳಷ್ಟು ಎತ್ತರಕ್ಕೆ ಬೆಳೆದ ನಮ್ಮ ಪ್ರೀತಿಯ ನಾಯಕ ಎಸ್.ಎಂ.ಕೃಷ್ಣ ಅವರನ್ನು ಇಂದು ನಾವು, ಸಂಪುಟದ ಸಹೋದ್ಯೋಗಿ ಎಸ್.ಟಿ.ಸೋಮಶೇಖರ್, ಮೈಸೂರು ಮೇಯರ್ ಮತ್ತು ಸಂಸದರು ಆಗಮಿಸಿ ದಸರಾ ಉದ್ಘಾಟನೆಗೆ ಆಹ್ವಾನಿಸಿದೆವು. ನಮ್ಮ ಆಮಂತ್ರಣವನ್ನು ಸಂತೋಷದಿAದ ಒಪ್ಪಿಕೊಂಡಿದ್ದಕ್ಕೆ ನಾನು ಆಭಾರಿಯಾಗಿದ್ದೇನೆ ಎಂದರು.

ಎಸ್.ಎA.ಕೃಷ್ಣ ಅವರಿಗೆ ಮೈಸೂರು ಪೇಟಾ ತೊಡಿಸಿ, ಫಲಪುಷ್ಪ ತಾಂಬೂಲದೊAದಿಗೆ, ಶಿವಾನಿ ಮರದಲ್ಲಿ ಕೈಯಿಂದ ಕೆತ್ತಲಾದ ಅಂಬಾರಿಯ ವಿಗ್ರಹದ ನೆನಪಿನ ಕಾಣಿಕೆ ನೀಡಿ ಗೌರವಿಸುವ ಮೂಲಕ ದಸರಾ ಉದ್ಘಾಟನೆಗೆ ಆಹ್ವಾನಿಸಲಾಯಿತು.

ಈ ಸಂದರ್ಭದಲ್ಲಿ ಕಂದಾಯ ಸಚಿವ  ಅಶೋಕ್, ಮೈಸೂರು ಮತ್ತು ಕೊಡಗು ಲೋಕಸಭಾ ಸದಸ್ಯ ಪ್ರತಾಪ್ ಸಿಂಹ,  ಮುಡಾ ಅಧ್ಯಕ್ಷ ಎಂ.ಸಿ.ರಾಜೀವ್, ಮೈಸೂರು ಜಿಲ್ಲಾ ಬಿಜೆಪಿ ಅಧ್ಯಕ್ಷ ಶ್ರೀವತ್ಸವ, ಮೈಸೂರು ಮೇಯರ್ ಸುನಂದಾ ಪಾಲನೇತ್ರ, ಜಿಲ್ಲಾಧಿಕಾರಿ ಡಾ. ಬಗಾದಿ ಗೌತಮ್, ಸಹಕಾರ ಸಚಿವರ ವಿಶೇಷ ಕರ್ತವ್ಯಾಧಿಕಾರಿ ದಿನೇಶ್ ಗೂಳಿಗೌಡ, ಮುಖ್ಯಮಂತ್ರಿಗಳ ಪ್ರಧಾನ ಕಾರ್ಯದರ್ಶಿ ಮಂಜುನಾಥ್ ಪ್ರಸಾದ್, ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಸಿದ್ದರಾಜು, ಮಂಡ್ಯ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಸಿ.ಪಿ.ಉಮೇಶ್ ಮುಂತಾದವರು ಉಪಸ್ಥಿತರಿದ್ದರು.

Share