ಬೆಂಗಳೂರು: ಬೆಳ್ಳಂಬೆಳಗ್ಗೆ ಕೊಲೆ ಆರೋಪಿಗಳ ಕಾಲಿಗೆ ಗುಂಡೇಟು

Tuesday, July 6, 2021

ಹಾಡಹಗಲೇ ಹಣಕಾಸು ಲೇವಾದೇವಿ ಮಾಡುತ್ತಿದ್ದ ಮದನ್ ಕೊಲೆ ಮಾಡಿದ್ದ ಇಬ್ಬರೂ ಆರೋಪಿಗಳ ಕಾಲಿಗೆ ಜಯನಗರ ಪೊಲೀಸರು ಗುಂಡು ಹಾರಿಸಿ ಬಂಧಿಸಿದ್ದಾರೆ.

ಮಹೇಶ್, ನವೀನ್ ಗುಂಡೇಟು ತಿಂದ ಆರೋಪಿಗಳು.

ಬಂಧಿತ ಆರೋಪಿಗಳು ಲಕ್ಕಸಂದ್ರ ನಿವಾಸಿ ಹಣಕಾಸು ಲೇವಾದೇವಿ ಮಾಡುತ್ತಿದ್ದ ಮದನ್ ಅನ್ನು ಜು. 2 ರಂದು ಬನಶಂಕರಿ ದೇವಾಲಯದ ಎದುರು ಹಾಡಹಗಲೇ ಮಾರಕಾಸ್ತ್ರಗಳಿಂದ ಕೊಲೆ ಮಾಡಿದ್ದರು. ಕೃತ್ಯ ಎಸಗಿ ಮೂರು ದಿನಗಳ ಬಳಿಕ‌ ಸೋಮವಾರ ವಕೀಲರ ವೇಷದಲ್ಲಿ ನಗರದ 37ನೇ ಎಸಿಎಂಎಂ‌ ನ್ಯಾಯಾಲಯ ಮುಂದೆ ಶರಣಾಗಿದ್ದರು. ಕೋವಿಡ್ ನಿಯಮ ಪ್ರಕಾರ ಕೋರ್ಟ್ ಪ್ರವೇಶಕ್ಕೆ ನಿಷೇಧ ಇರುವ ಹಿನ್ನೆಲೆ ಜಯನಗರ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದರು.‌‌ 

ಸೋಮವಾರ ವಿಚಾರಣೆಗೆ ಒಳಪಡಿಸಿ‌ ಮಂಗಳವಾರ ತಲಘಟ್ಟಪುರದ ತುರಹಳ್ಳಿ ಅರಣ್ಯದ ಬಳಿ ಬಿಸಾಡಿದ್ದ ಮಾರಕಾಸ್ತ್ರ ಜಪ್ತಿಮಾಡಿಕೊಳ್ಳಲು ಮಹೇಶ್ ಹಾಗೂ ನವೀನ್ ನನ್ನು ಪೊಲೀಸರು ಸ್ಥಳ ಮಹಜರಿಗೆ ಕರೆದೊಯ್ಯದಿದ್ದರು.

ಈ ವೇಳೆ ಆರೋಪಿಗಳು ಪೊಲೀಸರ ಮೇಲೆ ಹಲ್ಲೆ ನಡೆಸಿ ತಪ್ಪಿಸಿಕೊಳ್ಳಲು ಮುಂದಾಗಿದ್ದರು. ತಪ್ಪಿಸಿಕೊಳ್ಳದಂತೆ ಇನ್​ಸ್ಪೆಕ್ಟರ್ ಸುದರ್ಶನ್ ಎಚ್ಚರಿಕೆ ಕೊಟ್ಟು ಒಂದು ಸುತ್ತು ಗಾಳಿಯಲ್ಲಿ ಗುಂಡು ಹಾರಿಸಿದ್ದರು. ಆದರೂ, ಪೊಲೀಸರ ಹಲ್ಲೆ ಮಾಡಲು ಮುಂದಾದಾಗ ತಮ್ಮ ಆತ್ಮರಕ್ಷಣೆಗಾಗಿ ಆರೋಪಿಗಳ ಬಲಗಾಲಿಗೆ ಗುಂಡಿ ಹಾರಿಸಿ ವಶಕ್ಕೆ ಪಡೆದಿದ್ದಾರೆ.

ಈ ಘಟನೆಯಲ್ಲಿ ಜಯನಗರ ಪೊಲೀಸ್ ಠಾಣೆಯ ಪಿಎಸ್ಐ ಚಂದನ್ ಕಾಳೆ ಮತ್ತು ಎಎಸ್ಐ ಲಕ್ಷ್ಮಣಾಚಾರಿ ಗಾಯಗೊಂಡಿದ್ದಾರೆ. ಸದ್ಯ ಆರೋಪಿ ಹಾಗೂ ಗಾಯಾಳಿ ಪೊಲೀಸರಿಗೆ ಆಸ್ಪತ್ರೆಗೆ ದಾಖಲಿಸಿ ಪ್ರಥಮ ಚಿಕಿತ್ಸೆ ನೀಡಲಾಗುತ್ತಿದೆ.

ಸದ್ಯ ಈ ಪ್ರಕರಣದಲ್ಲಿ ಏಳು ಜನರನ್ನು ಪೊಲೀಸರು ಬಂಧಿಸಿದ್ದಾರೆ. ಸದ್ಯ ಪ್ರಕರಣದ ತನಿಖೆ ನಡೆಸುತ್ತಿರುವ ಪೊಲೀಸರು, ಕೊಲೆಗೆ ಸಂಬಂಧಿಸಿದ ಇನ್ನೂ ಕೆಲ ಆರೋಪಿಗಳ ಪತ್ತೆ ಕಾರ್ಯ ಮುಂದುವರಿಸಿದ್ದಾರೆ.

Share